ನಾಗದೇವ
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಈ ವರೆಗೆ ಈ ಹೆಸರಿನ ಮೂವರು ಕವಿಗಳು ಕಾಣಬರುತ್ತಾರೆ. ಇವರಲ್ಲಿ ಒಬ್ಬ ಜೈನ. ಈತನನ್ನು ಎರಡನೆಯ ನಾಗವರ್ಮ ತನ್ನ ವರ್ಧಮಾನಪುರಾಣದಲ್ಲಿ ಸುಲೋಚನಾಚರಿತಮನಿಂ ಪೊದವಿರೆ ಪೇ¿್ದಂ ಕವಿತಾವಿದಗ್ಧನಮತಿಯೆನಿಪ ನಾಗದೇವಕವೀಂದ್ರಂ ಎಂದು ಹೇಳುವುದರಿಂದ ಈತ ಸುಲೋಚನಾಚರಿತ ಎಂಬ ಕಾವ್ಯವನ್ನು ರಚಿಸಿದಂತೆ ತಿಳಿದುಬರುತ್ತದೆ. ನಾಗವರ್ಮ ಸ್ತುತಿಸಿರುವ ಎಲ್ಲ ಕವಿಗಳ ಕೃತಿಗಳು ಚಂಪೂಕೃತಿಗಳಾಗಿರುವುದರಿಂದ ಇದೂ ಚಂಪೂಕೃತಿಯಾಗಿರಬಹುದೆಂದು ಊಹಿಸಬಹುದಾಗಿದೆ. ಎರಡನೆಯ ನಾಗವರ್ಮ ಕ್ರಿ.ಶ. 1042ರಲ್ಲಿದ್ದವನಾದುದರಿಂದ ಈತ ಇದಕ್ಕೂ ಹಿಂದೆ ಇದ್ದಿರಬೇಕು.

ಕವಿಚರಿತೆಕಾರರು ಶಕ 1129ರಲ್ಲಿ ಕಡೂರು 129ನೆಯ ಶಾಸನವನ್ನು ಬರೆದ ಒಬ್ಬ ನಾಗದೇವನನ್ನು ಹೆಸರಿಸುತ್ತಾರೆ. ಈತನ ಕಾಲ 1217 ಆಗುತ್ತದೆ. ಈತನನ್ನು ಕವಿತಿಳಕ ಎಂದು ವಿಶ್ಲೇಷಿಸಿ ಹೇಳಿದೆ. ಈತ ಗೌತಮ ಗೋತ್ರದವ. ಈತನ ತಂದೆ ನಾಗದೇವ. ತಾಯಿ ಚಾಮವ್ವೆ ಎಂದು ತಿಳಿದುಬರುತ್ತದೆ.
ಅಲ್ಲದೆ ಧಾರವಾಡ ಜಿಲ್ಲೆ ಗದಗು ತಾಲ್ಲೂಕಿನ ಕುರ್ತಕೋಟಿಯಲ್ಲಿರುವ ಶಾಸನಗಳಲ್ಲಿ ಎರಡನ್ನು ಬರೆದ, 1082ರಲ್ಲಿದ್ದ ಒಬ್ಬ ನಾಗದೇವ ಕಾಣಬರುತ್ತಾನೆ. ತ್ರಿಭುವನಮಲ್ಲ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ (1076-1126) ಈ ಶಾಸನ ಲಿಖಿತವಾಗಿದೆ. ಈ ಶಾಸನದಲ್ಲಿ ಬರುವ
ಅಂಬುಧಿವೇಷ್ಟಿತವಸು

ಧಾಂಬಿಕೆಗೆ ಲಲಾಮಮೆನಿಪ ವಿಪ್ರಗ್ರಾಮಂ
ಪೊಂಬಳಲ ನಾಗದೇವ ಬು
ಧಂ ಬುಧತತಿ ಮೆಚ್ಚೆ ಕಾವ್ಯಮಂ ವಿರಚಿಸಿದಂ

ಎಂಬ ಪದ್ಯದಿಂದ ಈತ ಪ್ರಸಿದ್ಧವಾದ ವಿಪ್ರಗ್ರಾಮ ಪೊಂಬಳಲ ನಾಗದೇವನೆಂದು ತಿಳಿದುಬರುತ್ತದೆ. ಎರಡನೆಯ ನಾಗವರ್ಮ 1042ರಲ್ಲಿದ್ದವನಾದುದರಿಂದ 1217ರ ಮತ್ತು 1082ರಲ್ಲಿದ್ದ ಈ ಇಬ್ಬರು ಶಾಸನಕವಿಗಳಿಗೂ ಸುಲೋಚನಾಚರಿತೆಯ ನಾಗದೇವನಿಗೂ ಸಂಬಂಧವಿಲ್ಲವೆಂದು ಹೇಳಬಹುದು.	
		(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ